ಫ್ರಾಂಕೊ - ಜರ್ಮನ್ ಯುದ್ಧ 
 
ಫ್ರಾಂಕೊ-ಪ್ರಷ್ಯನ್ ಯುದ್ಧವೆಂದೂ ಇದನ್ನು ಕರೆಯುವುದುಂಟು. ಫ್ರಾನ್ಸ್ ಮತ್ತು ಪ್ರಷ್ಯ ಹಾಗೂ ಇತರ ಜರ್ಮನ್ ರಾಜ್ಯಗಳ ನಡುವೆ 1870 ಜುಲೈ 19ರಿಂದ 1871 ಜನವರಿ 28ರ ತನಕ ನಡೆದ ಯುದ್ಧ. ಸ್ಪೇನಿನ ದೊರೆತನದ ಪ್ರಶ್ನೆಯೇ ನಿಮಿತ್ತವಾಗಿ ಈ ಯುದ್ಧ ಆರಂಭವಾಯಿತು. ಸ್ಪೇನಿನ ಸಿಂಹಾಸನವನ್ನು ಜರ್ಮನಿಯ ಪ್ರಾಂತ್ಯವೊಂದಾದ ಸ್ವಾಬಿಯದ ಹೋಅನ್‍ಸೋಲರ್ನ ಮನೆತನದ ರಾಜಕುಮಾರನೊಬ್ಬನಿಗೆ ನೀಡಲಾಗಿತ್ತು. ಜರ್ಮನ್ ರಾಜ್ಯಗಳೊಡನೆ ವೈರ ಸಾಧಿಸುತ್ತಿದ್ದ ಫ್ರಾನ್ಸ್ ಇದನ್ನು ವಿರೊಧಿಸಿತು. ರಾಜಕುಮಾರ ದೊರೆತನವನ್ನು ನಿರಾಕರಿಸಿದ. ಪ್ರಷ್ಯದ 1ನೆಯ ವಿಲಿಯಮ್‍ನನ್ನು ಫ್ರೆಂಚ ರಾಯಭಾರಿ ಬೆನೆಡೆಟಿ ಭೇಟಿಮಾಡಿ, ಹೋಅನ್‍ಸೋಲರ್ನ್ ವಂಶದ ಯಾರೂ ಎಂದೂ ಸ್ಪೇನಿನ ಸಿಂಹಾಸನವನ್ನು ಅಪೇಕ್ಷೆ ಪಡಬಾರದೆಂಬ ಭರವಸೆ ಬಯಸಿದ. ವಿಲಿಯಮ್ ಒಪ್ಪಲಿಲ್ಲ. ಪ್ರಷ್ಯದ ಪ್ರಧಾನಿಯಾಗಿದ್ಧ ಬಿಸ್ಮಾರ್ಕ್ ಫ್ರಾನ್ಸನ್ನು ಯುದ್ಧಕ್ಕೆ ಎಳೆಯಬೇಕೆಂಬ ಉದ್ದೇಶದಿಂದ ಈ ಭೇಟಿಯನ್ನು ಉದ್ರೇಕಕರವಾದ ರೀತಿಯಲ್ಲಿ ಪ್ರಕಟಿಸಿದ. ಫ್ರೆಂಚ್ ಸರ್ಕಾರ ಯುದ್ಧ ಘೋಷಿಸಿತು. ಪ್ರಷ್ಯವೂ ಇತರ ಜರ್ಮನ್ ರಾಜ್ಯಗಳೂ ಒಂದಾಗಿ ಫಾನ್ ಮೋಲ್ಟ್ಕೆಯ ನಾಯಕತ್ವದಲ್ಲಿ ಫ್ರಾನ್ಸಿನ ವಿರುದ್ಧ ಕಾದಿದುವು. ಸೆಡಾನಿನಲ್ಲಿ ಫ್ರಾನ್ಸ್ ಭಾರಿ ಪರಾಭವವನ್ನು ಅನುಭವಿಸಿತು. 3ನೆಯ ನೆಪೋಲಿಯನ್ ಸೆರೆಯಾದ (ಸೆಪ್ಟೆಂಬರ್ 1). ತಾತ್ಕಾಲಿಕ ಸರ್ಕಾರವೊಂದರ ನೇತೃತ್ವದಲ್ಲಿ ಫ್ರಾನ್ಸ್ ಯುದ್ಧ ಮುಂದುವರಿಸಿತು. ಮೇಲಿನಿಂದ ಮೇಲೆ ಉಂಟಾದ ಸೋಲನ್ನು ಅದು ಲೆಕ್ಕಿಸಲೊಲ್ಲದೆ ಹೋಯಿತು. ಕೊನೆಗೆ ಜರ್ಮನ್ ಪಡೆಗಳು ಪ್ಯಾರಿಸ್ ನಗರವನ್ನು 1871ರಲ್ಲಿ ಆಕ್ರಮಿಸಿದವು. 1871, ಮೇ 10ರಂದು ಫ್ರಾಂಕ್‍ಫರ್ಟ್ ಒಪ್ಪಂದದೊಡನೆ ಯುದ್ಧ ಕೊನೆಗೊಂಡಿತು.

	ಈ ಯುದ್ಧದ ಪರಿಣಾಮಗಳು ಮೂರು: 1ನೆಯ ವಿಲಿಯಮನ ನೇತೃತ್ವದಲ್ಲಿ ಜರ್ಮನ್ ಸಾಮ್ರಾಜ್ಯಸ್ಥಾಪನೆ; ಫ್ರಾನ್ಸಿಗೆ ಸೇರಿದ್ದ ಅಲ್ಸೇಸ್-ಲೊರೇನ್ ಪ್ರದೇಶ ಜರ್ಮನಿಗೆ ಸೇರ್ಪಡೆ, ಫ್ರಾನ್ಸಿನಲ್ಲಿ ಮೂರನೆಯ ಗಣರಾಜ್ಯದ ಸ್ಥಾಪನೆ.
   												(ಕೆ.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ